ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ದಂಡ

ನಿಮ್ಮ ವಾಹನಕ್ಕೆ ನೊಂದಣಿ ಸಂಖ್ಯೆಯನ್ನು ಸ್ಟಿಕ್ಕರ್ ರೀತಿ ಅಂಟಿಸಿದ್ದೀರಾ, ನಿಮ್ಮ ವಾಹನ 2019ರ ಏಪ್ರಿಲ್ 1ಕ್ಕಿಂತ ಹಳೆಯದಾಗಿದೆಯೆ; ಹಾಗಿದ್ದರೆ ನೀವು ಸರಿಯಾದ ಲೇಖನವನ್ನು ಓದುತ್ತಿದ್ದೀರಿ. ಆತ್ಮೀಯ ವಾಹನ ಸವಾರರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ. ಈಗಾಗಲೇ ಕರ್ನಾಟಕ ಸರ್ಕಾರ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿದೆ. ಹಾಗಾಗಿ ನೀವು ನಿಮ್ಮ ವಾಹನಕ್ಕೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿ. ಇಲ್ಲವಾದಲ್ಲಿ ದಂಡ ಕಟ್ಟಬೇಕಾದಿತು.


ಏನಿದು ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ?

ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್.ಈ ಪ್ಲೇಟನ್ನು ಅಲ್ಯುಮಿನಿಯಂ ಲೋಹದಿಂದ ತಯಾರಿಸಿರುತ್ತಾರೆ. ಈಗಾಗಲೇ ಹೊಸ ವಾಹನಗಳಲ್ಲಿ ನಂಬರ್ ಪ್ಲೇಟನ್ನು ಹಾಕಲಾಗಿದೆ. ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಪ್ಲೇಟಿನ ಎಡಭಾಗದಲ್ಲಿ ಅಂಟಿಸಲಾಗಿದೆ. ಈ ಮುದ್ರೆಯು 20 ಮಿಲಿ ಮೀಟರ್ ಉದ್ದ ಮತ್ತು ಅಗಲವನ್ನು ಹೊಂದಿದ್ದು, ಕ್ರೋಮಿಯಂ ಲೋಹದಿಂದ ಈ ಮುದ್ರೆಯನ್ನು ತಯಾರಿಸಿರುತ್ತಾರೆ. ಒಟ್ಟಾರೆಯಾಗಿ ದೇಶದ ಜನರಿಗೆ ಒಳಿತಿಗೋಸ್ಕರ ಈ ಒಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.


ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ನ ಲಾಭಗಳೇನು ?

 ಈ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ನಿಂದ ನಿಮ್ಮ ವಾಹನದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ನಿಂದ ವಾಹನದ ಎಂಜಿನ್ ಮತ್ತು ಚಾರ್ಸಿ ಸಂಖ್ಯೆಯನ್ನು ಪಡೆಯಬಹುದು. ನಿಮ್ಮ ವಾಹನ ಕಳ್ಳತನವಾದಲ್ಲಿ ಪತ್ತೆಹಚ್ಚಲು ಸಹಾಯಕವಾಗುತ್ತದೆ. 


ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸದಿದ್ದರೆ ನಷ್ಟಗಳೇನು ? ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸದಿದ್ದರೆ ವಾಹನವನ್ನು ಖರೀದಿ ಅಥವಾ ಮಾರಾಟ ಮಾಡಲು ಆಗುವುದಿಲ್ಲ. ಹೆಸರು ತಿದ್ದುಪಡಿ,ವಿಳಾಸ ತಿದ್ದುಪಡಿ ಹಾಗೂ ಇನ್ನಿತರ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆರ್‌ಸಿ ಜೆರಾಕ್ಸ್ ಪಡೆಯಲು ಸಾಧ್ಯವಾಗುವುದಿಲ್ಲ .ವಾಹನದ ಸಾಮರ್ಥ್ಯ ಅನುಮೋದನೆಗೆ ಸಾಧ್ಯವಾಗುವುದಿಲ್ಲ. ವಾಹನದ ವಿಮೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಒಟ್ಟಾರೆಯಾಗಿ ವಾಹನ ಚಲಾಯಿಸಲು ಸಾಧ್ಯವಾಗುವುದಿಲ್ಲ.


ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸದಿದ್ದರೆ ದಂಡ ಎಷ್ಟು ? 

ನಿಮ್ಮ ವಾಹನ 2019ರ ಏಪ್ರಿಲ್ 1ಕ್ಕಿಂತ ಹಳೆಯದಾಗಿದ್ದು, ಇದುವರೆಗೂ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಲ್ಲವೆಂದರೆ ಕೂಡಲೇ ಹಾಕಿಸಿ. ಆತಂಕ ಬೇಡ....ಕರ್ನಾಟಕ ಸಾರಿಗೆ ಇಲಾಖೆಯು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಲು ನವೆಂಬರ್ ತಿಂಗಳವರೆಗೂ ಕಾಲಾವಕಾಶವನ್ನು ನೀಡಿದೆ. ಅದರ ನಂತರ ಕೂಡ ಹಾಕಿಸದಿದ್ದರೆ ಪೊಲೀಸರು ನಿಮಗೆ ದಂಡ ಹಾಕುತ್ತಾರೆ.  ನಿಮಗೆ ಕನಿಷ್ಠ 500 ರೂಪಾಯಿಗಳಿಂದ 1,000 ರೂಪಾಯಿಗಳವರೆಗೆ ದಂಡವನ್ನು ವಿಧಿಸುವ ಸಾಧ್ಯತೆಇದೆ. 


ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಪಡೆಯುವುದು ಹೇಗೆ ?

ಮೊದಲಿಗೆ ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರ ಅಂದರೆ ಸೈಬರ್ ಸೆಂಟರ್ಗೆ ಭೇಟಿಯನ್ನು ನೀಡಿ. ಅವರಿಗೆ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಆರ್ಡರ್ ಮಾಡಲು ತಿಳಿಸಿ. ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ಗೆ ಕನಿಷ್ಠ 400 ರಿಂದ 500 ರೂಪಾಯಿಗಳಿರುತ್ತದೆ. ಅವರು ಆರ್ಡರ್ ಮಾಡಿದ ಶುಲ್ಕ ಸೇರಿ 500 ಕ್ಕಿಂತ ಹೆಚ್ಚಿನ ಮೊತ್ತವನ್ನು ನೀವು ಪಾವತಿಸಬೇಕು. ನಮ್ಮ ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಡೀಲರ್ ಶಾಪ್ಗಳಿವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅದನ್ನು ಡೆಲಿವರಿ ವಿಳಾಸ ಎಂದು ಖಚಿತಪಡಿಸಿ. ಆನಂತರ ನಿಮಗೆ ಆರ್ಡರ್ ಮಾಡಿದ ರಶೀದಿಯನ್ನು ನೀಡಲಾಗುತ್ತದೆ. ಅದರಲ್ಲಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ದಿನಾಂಕವನ್ನು ನಿಗದಿಪಡಿಸಿರುತ್ತಾರೆ. ಆ ರಶೀದಿಯಲ್ಲಿ ಒಂದು ಮೊಬೈಲ್ ಸಂಖ್ಯೆಯನ್ನು ನೀಡಲಾಗಿರುತ್ತದೆ; ಅದಕ್ಕೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿ. ಅವರು ನೀಡಿದ ಮಾಹಿತಿಯ ಪ್ರಕಾರ ನಿಮ್ಮ ವಾಹನವನ್ನು ಡೀಲರ್ ಬಳಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಅವರು ನಿಮ್ಮ ವಾಹನಕ್ಕೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುತ್ತಾರೆ.